ಜಪಾನೀ ನಾಟಕ	-
15ನೆಯ ಶತಮಾನಕ್ಕಿಂತ ಮುಂಚೆ ಹಲವಾರು ವರ್ಷಗಳು ಜಪಾನಿನಲ್ಲಿ ಪ್ರಚಲಿತವಿದ್ದ ನಾಟಕ ಪ್ರಕಾರಕ್ಕೆ ಸಾರು-ಗಾಕು ಎಂಬ ಹೆಸರಿತ್ತು. ಅರ್ಥಾತ್ ಮರ್ಕಟಗೀತನೃತ್ಯ ಎಂದರೂ ಸರಿಯೆ. ಸಾಮಾನ್ಯ ಭಾಷೆಯಲ್ಲಿ ಕೋತಿಯ ಕುಣಿತ ಎಂದರೂ ಸರಿಯೆ. ಆದರೆ ಅದರಷ್ಟು ಲಾಘವವಲ್ಲ. ವ್ಯಾಯಾಮ ಪಟುವೊಬ್ಬ ಗಾಯಕನಾಗಿ ರಂಗಭೂಮಿಗೆ ಬಂದು ನಿಂತು ಆಗಾಗ ಮೈ, ಮಾಂಸಖಂಡ, ಅಂಗಾಂಗಗಳ ವಿವಿಧ ಬಗೆಯ ಚಲನ ಚಮತ್ಕಾರದ ಪ್ರದರ್ಶನ ಮಾಡಿ, ಮಧ್ಯೆಮಧ್ಯೆ ಲಘುಹಾಸ್ಯದ ಮಾತನಾಡುತ್ತ ತಕ್ಕ ಅಭಿನಯದಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ ಪರಿಪಾಠ ಇದರಲ್ಲಿತ್ತು. ಈ ಬಗೆಯ ನಾಟಕ ಯಾಮಾಟೊ ಪ್ರಾಂತದಲ್ಲಿ ಜನಿಸಿ ಜಪಾನಿಗೆಲ್ಲ ಹರಡಿ ಮನೋರಂಜನೆಯ ಏಕಮೇವ ಸಾಧನವಾಗಿತ್ತು ಎಂಬುದು ಮುಖ್ಯವಿಷಯ.

15ನೆಯ ಶತಮಾನದಲ್ಲಿ ಕ್ವಾನಾಮಿ ಕಿಯೋಟ್ಸುಗು ಮತ್ತು ಆತನ ಮಗ ಸೀಆಮಿ ಮೊಟೊಷಿಯೊ ರಂಗಭೂಮಿಯ ಅವತಾರಪುರುಷರಾಗಿ ಬಂದು ಸಾರು-ಗಾಕುವನ್ನು ತಲೆ ಕೆಳಗು ಮಾಡಿ ನೋಗಾಕು ಅಥವಾ ನೋಸಂಗೀತ ನಾಟಕ ಪ್ರಕಾರವನ್ನು ಜನತೆಗಿತ್ತರು. ಷೋಗನ್‍ಯೋಷಿ ಮಾಸಾ ಮನೆತನದವರಿಂದ ಪೋಷಿತರಾಗಿ ಸಾರು-ಗಾಕುವನ್ನು ಪೂರ್ಣ ಸುಧಾರಿಸಿದರು. ಜೊತೆ ಜೊತೆಗೇ ದನಿಗೂಡಿಸುತ್ತಿದ್ದ ದೆನ್ ಗಾಕುಗಳಿಂದ (ಬತ್ತದ ಗದ್ದೆಯ ಗೀತ) ತಮಗೆ ಉಚಿತವೆಂದು ತೋಚಿದ್ದನ್ನು ಆಯ್ದುಕೊಂಡು ಸಾರು-ಗಾಕುವನ್ನು ಬುನಾದಿಯಾಗಿಸಿ ಅದರ ಮೇಲೆ ಭವ್ಯ ನಾಟಕ ಕಟ್ಟಡ ಒಂದನ್ನು ರಚಿಸಿದರು. ಈ ಇಬ್ಬರೂ ಬಹಳ ಪ್ರತಿಭಾವಂತರು. ಸಾರು-ಗಾಕುವಿನಲ್ಲಿ ಅಲಂಕಾರಪ್ರಾಯವಾಗಿದ್ದುದನ್ನು ಗೌರವ ಗಾಂಭೀರ್ಯಗಳಿಂದ ತುಂಬಿ, ಲಘುಹಾಸ್ಯದ ಕೈಕಾಲು ಮೈಚಳಕಗಳನ್ನು ವರ್ಜಿಸಿ ಕೀಯೋಜೆóನ್‍ಗಳನ್ನಾಗಿ (ಪ್ರಹಸನ) ಮಾರ್ಪಡಿಸಿದರು. ನೋ ಮತ್ತು ಕೀಯೋಜೇನ್ ಹದವಾಗಿ ಬೆರೆತು ಸಮರಸವಾಗಿ ಪ್ರದರ್ಶನಗೊಂಡು ಜಪಾನ್ ರಂಗಭೂಮಿಯಲ್ಲಿ ನೋನಾಟಕಗಳು ಮೊದಲ ಬಾರಿಗೆ ಜನತೆಯ ಮನೋರಂಜನಾಸಾಧನವಾಗಿ ಪರಿಣಮಿಸಿದ್ದು 15ನೆಯ ಶತಮಾನದ ಮಧ್ಯ ಭಾಗದಲ್ಲಿ.

ಸಾರು-ಗಾಕು ಗೋಗಿ ನೋಗಾಕು ಆದ ನಾಟಕ ಸಾಮಾನ್ಯವಾಗಿ ಶ್ರೀಮಂತರು, ಮಧ್ಯಯುಗದ ಜಪಾನಿನ ಪಾಳೆಯಗಾರ ಕ್ಷತ್ರಿಯರು-ಇವರಿಗೆ ಮುಖ್ಯ ಮನೋರಂಜನಾ ಪ್ರಕಾರವಾಗಿತ್ತು. ಕೆಲವಾರು ಸಲ ಜಪಾನಿನ ಚಕ್ರವರ್ತಿಯ ಸಮ್ಮುಖದೆದುರೂ ಇದರ ಪ್ರದರ್ಶನ ಆಗುತ್ತಿತ್ತು. ಕೆಲವೊಮ್ಮೆ ಟೋಕುಗಾವಾ ಷೋಗನ್‍ರವರ ಹಬ್ಬಹರಿದಿನದ ಉತ್ಸವಗಳಲ್ಲೂ ಯಾವ ಯಾವ ಇಂಥ ಸಂದರ್ಭಗಳು ಬಿದ್ದಾಗಲೂ ನೋ ನಾಟಕಗಳು ಪ್ರದರ್ಶನ ಮೊದಲ ಕರ್ತವ್ಯವಾಗಿರುತ್ತಿತ್ತು.

ಪ್ರದರ್ಶನ : ಮರಮುಟ್ಟುಗಳಿಂದ ಆದ ಹದಿನೆಂಟು ಚೌಕದ ರಂಗಸ್ಥಳ ನೆಲಮಟ್ಟಕ್ಕೆ ಸ್ವಲ್ಪ ಎತ್ತರದ ಒಂದು ವೇದಿಕೆಯ ಮೇಲಿರುತ್ತದೆ. ರಂಗಕ್ಕೆ ಮೂರು ಕಡೆ ತೆರೆಯಿಲ್ಲ. ಎರಡು ಬಾಗಿಲುಗಳು, ಒಂದು ಗಾಯಕರ ಓಡಾಟಕ್ಕೆ, ಇನ್ನೊಂದು ಇತರ ಕೆಲಸಗಾರರ ಓಡಾಟಕ್ಕೆ. ಹಿಂದಿನ ದ್ವಾರದ ಆಚೆಕಡೆಗೊಂದು ಸೇತುವೆ,-ಹಷಿಗಾಕಾರಿ. ಇದನ್ನು ಅರ್ಧ ತೆರೆಯೊಂದು ಮುಚ್ಚಿರುತ್ತದೆ. ತೆರೆಯ ಕೆಳಗಿನಿಂದ ಅಭಿನೇತೃಗಳ ಆಗಮನ. ರಂಗಭೂಮಿಯ ನೆಲ ಸ್ವಲ್ಪ ಹಿಂದೆ ಎತ್ತರವಾಗಿದ್ದು. ಮಧ್ಯೆ ಎತ್ತರವಾಗಿದ್ದು ಪ್ರೇಕ್ಷಕರ ಕಡೆಗೆ ತಗ್ಗಿ ಸ್ವಲ್ಪ ಇಳಿಜಾರು ಪ್ರದೇಶವಾಗಿರುತ್ತದೆ. ವೇದಿಕೆಯ ನೆಲಮಾಳಿಗೆಗೆ ಸರಿಯಾಗಿ 7-8 ಸುಟ್ಟಮಣ್ಣಿನ ಜಾಡಿಗಳನ್ನಿಟ್ಟಿರುತ್ತಾರೆ. ಎರಡು ಮೂರನ್ನು ಹಿಂದಿನ ಪ್ರವೇಶ ದ್ವಾರದ ಕಡೆಗಿನ ಸೇತುವೆಯ ಕೆಳಗಿಟ್ಟಿರುತ್ತಾರೆ. ಜಾಡಿಗಳ ಗಾಳಿ ಕಂಪಿಸುವುದರಿಂದ ವೇದಿಕೆಯ ಮೇಲಿನ ಧ್ವನಿಗಳು ಇಮ್ಮಡಿಯಾಗುತ್ತವೆ. ಹಿಂದೆ ಪರದೆಯ ಮೇಲೆ ಕಾಡಿನ ಭವ್ಯದೃಶ್ಯ ಚಿತ್ರಿಸಿರುತ್ತಾರೆ. ಇದರ ಅರ್ಥ ಒಂದಾನೊಂದು ಕಾಲದಲ್ಲಿ ನೋ ನಾಟಕಗಳನ್ನೆಲ್ಲ ಅರಣ್ಯಗಳಲ್ಲೋ ತಪೋವನಗಳಲ್ಲೋ ಪ್ರದರ್ಶಿಸುತ್ತಿದ್ದರು-ಎಂದು. ಈ ಚಿತ್ರಗಳು ಕತೆಗೆ ತಕ್ಕಂತಿರುತ್ತವೆ.

ನೋ ನಾಟಕಗಳು: 250ಕ್ಕೂ ಮಿಕ್ಕು ರಚಿತವಾಗಿರುವ ನೋ ನಾಟಕಗಳನ್ನು ಅನುಕೂಲಕ್ಕಾಗಿ ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. (1) ವಾಕಿ-ನೋ ಇದರಲ್ಲಿ ನಾಟಕದ ಎರಡನೆಯ ಪ್ರಮುಖ ನಟ ಮುಖ್ಯಭಾಗವಹಿಸುತ್ತಾನೆ. (2) ಷುರ-ಮೊನೊ. ಯೋಧರ ಭೂತಕತೆಗಳೇ ಇದರ ವಸ್ತು. (3) ಕಜುರ-ಮೊನೊ. ಇದರಲ್ಲಿ ಪ್ರಮುಖ ಪಾತ್ರ ವಹಿಸುವವರು ಶ್ರೀಮಂತ ಮಹಿಳೆಯರು. (4) ಗೆನ್‍ಜಾಯಿಮೊನೊ. ಆಧುನಿಕ ನಾಟಕಪ್ರಕಾರವಿದು ; ಉನ್ಮಾದ, ಪ್ರೇಮ, ಮುಂತಾದ ಮಾನವೀಯ ಭಾವೋದ್ವೇಗಗಳನ್ನು ವಸ್ತುವಾಗಿ ಉಳ್ಳದ್ದು. (5) ರಾಕ್ಷಸರು, ಕುಬ್ಜರು, ಮಂತ್ರಗಾರರು ಮುಂತಾದವರ ಕತೆಗಳನ್ನು ವಸ್ತುವಾಗಿ ಉಳ್ಳದ್ದು, ಅಥವಾ ಲಘು ಮನರಂಜನೆ, ಆನಂದೋತ್ಸಾಹದ ಸನ್ನಿವೇಶಗಳಿಂದ ಕೂಡಿದ್ದು, ಅಭಿನಂದನ ಕಾರ್ಯಕ್ರಮವೊಂದನ್ನು ವಸ್ತುವಾಗುಳ್ಳದ್ದು.

ಇಡೀ ಒಂದು ದಿನವೆಲ್ಲ ನಡೆಯುವ ನೋ ಪ್ರದರ್ಶನದಲ್ಲಿ ಮೇಲ್ಕಂಡ ಅಂಶಗಳು ಒಂದಾಗುತ್ತಲೊಂದು ಮೇಲೆ ಸೂಚಿಸಿದ ಕ್ರಮದಲ್ಲಿ ಬರುತ್ತವೆ. ಒಂದೊಂದು ವಿಭಾಗಕ್ಕೂ ಮಧ್ಯೆ (ಕೀಯೋಜೆನ್) ಒಂದೊಂದು ಪ್ರಹಸನ, ಜೊತೆಗೆ ಸಾಮಾನ್ಯ ಪೋಷಾಕಿನಲ್ಲಿ ಒಂದು ನೃತ್ಯ ನಡೆಯುತ್ತವೆ.

ದೊಡ್ಡ ನಾಟಕಕ್ಕಿಂತ ಮೊದಲು, ತುಂಬ ಭಕ್ತಿರಸಪೂರಿತವಾದ 'ಓಕೀನದ ಕಿರುನಾಟಕವಿರುತ್ತದೆ. ಚಿಕ್ಕದಾದರೂ ಇದಕ್ಕೆ ವಿಶೇಷ ಗೌರವವಿದೆ. ಏಕೆಂದರೆ, ಇದರ ಪ್ರಮುಖ ಅಭಿನೇತೃ ಓಕೀನ-ಕಾಂತಿಯುಕ್ತನಾದ ಸೂರ್ಯದೇವತೆಯ ಸಂಕೇತ.
ನೋ ನಾಟಕದ ರಚನೆ : ಸ್ಥೂಲವಾಗಿ ನೋ ನಾಟಕದ ರಚನೆ ಹೀಗಿರುತ್ತದೆ ; ನಟರಲ್ಲಿ ಎರಡನೆಯ ದರ್ಜೆಯವನಾದ ವಾಕಿ-ಒಬ್ಬ ತಾಪಸಿ ಅಥವಾ ರಾಜ್ಯದ ಮಂತ್ರಿಗಳಲ್ಲೊಬ್ಬ. ಮೊದಲು ರಂಗಭೂಮಿಯ ಮೇಲೆ ಅವತರಿಸಿ ತನ್ನ ಪರಿಚಯ ಮಾಡಿಕೊಡುತ್ತಾನೆ. ಆಮೇಲೆ ಆಚೀಚೆಗೆ ಓಡಾಡುತ್ತಾನೆ. ತಾನು ಪ್ರವಾಸ ಕೈಗೊಂಡಿದ್ದೇನೆಂಬುದರ ಸೂಚನೆ ಇದು. ಹಾಗೇ ಹಾಡುತ್ತ ಪ್ರಯಾಣ ಬೆಳೆಸಿ, ಒಂದು ಕಡೆ ಸ್ತುಬ್ಧವಾಗಿ ನಿಲ್ಲುತ್ತಾನೆ. ಒಂದು ಪ್ರಖ್ಯಾತ ಸ್ಥಳಕ್ಕೋ ನಗರಕ್ಕೋ ಕ್ಷೇತ್ರಕ್ಕೋ ಬಂದಿಳಿದನೆಂದು ಇದಕ್ಕೆ ಅರ್ಥ. ಅನಂತರ ರಂಗಭೂಮಿಯ ಬಲ ಭಾಗದ ಕಂಭಕ್ಕೆ ಮೈ ಆತುನಿಂತು ರಂಗಸ್ಥಳದ ಕಡೆ ಮುಖಮಾಡಿಕೊಂಡಿರುತ್ತಾನೆ.

ಅನಂತರ ಮೊದಲ ಸಲ ಪ್ರಮುಖನಾಗಿ ಮುಖದೋರುವ ನಟ ಮಯೆಜಿತೆ-ಒಬ್ಬ ರೈತ ಬೆಸ್ತ ಅಥವಾ ಪೂಜಾರಿಯ ವೇಷದಲ್ಲಿ ರಂಗಭೂಮಿಗೆ ಬಂದು ಸುತ್ತಲಿನ ದೃಶ್ಯವನ್ನು ವರ್ಣಿಸುತ್ತಾನೆ. ಅಥವಾ ಕಂಭಕ್ಕೆ ಮೈಗೊಟ್ಟು ನಿಂತಿರುವ ವಾಕಿಯೊಡನೆ ಸಂಭಾಷಿಸುತ್ತಾನೆ. ಅವರ ಸಂಭಾಷಣೆಯಲ್ಲಿ ಆ ಕ್ಷೇತ್ರದ ಇತಿಹಾಸ, ಅಲ್ಲಿ ಆಗಿ ಹೋದ ವೀರಯೋಧರು ಮುಂತಾದ ವಿವರಣೆ ಬರುತ್ತದೆ. ಅಥವಾ ಸಂದರ್ಭೋಚಿತವಾಗಿ ಅಲ್ಲೊಂದು ದೇವಾಲಯ, ಗುಡಿಯಿದ್ದರೆ ಅದರ ಉಗಮ, ಚರಿತ್ರೆ, ಸಂಬಂಧಿಸಿದ ಕತೆ ತಿಳಿಯುತ್ತದೆ. ಹೀಗೆ ಮುಂದೆ ಬರುವ ನಾಟಕದ ಮುನ್ಸೂಚನೆ ಇದಾಗುತ್ತದೆ ಮತ್ತು ಅದಕ್ಕೆ ಉತ್ತಮ ಹಿನ್ನೆಲೆಯೂ ಆಗುತ್ತದೆ.
ಆ ಕ್ಷಣದಲ್ಲಿ ಮಯೆಜಿತ ಅವಸರದಲ್ಲಿ ಅಂತರ್ಧಾನನಾಗುತ್ತಾನೆ. ವಾಸ್ತವವಾಗಿ ಅವನೊಬ್ಬ ಬುದ್ಧ ಅಥವಾ ಷಿಂಟೋ ದೇವತೆ. ಇಲ್ಲದಿದ್ದರೆ ಛದ್ಮವೇಷದಲ್ಲಿ ಬಂದಿರುವ ಯಾರೋ ವೀರಯೋಧನ ಭೂತ. ವಾಕಿಗೆ ಇದರಿಂದ ಅಚ್ಚರಿ ಒಡನೆಯೇ ಸಾಮಾನ್ಯ ರೈತಾಪಿ ಜನ, ಮರ ಕಡಿದು ರೂಪುಗೊಳಿಸುವ ಮರಗೆಲಸದವರು ಅಥವಾ ಸೌದೆ ಒಡೆಯುವವರು, ಸ್ವಲ್ಪ ಸಂಖ್ಯೆಯಲ್ಲಿ ರಂಗಭೂಮಿಗೆ ಬರುತ್ತಾರೆ. ಆ ಕ್ಷೇತ್ರದ ಬಗ್ಗೆ ಮೊದಲು ಕಾವ್ಯಮಯವಾಗಿ ಕೊಟ್ಟ ವಿವರಣೆಯನ್ನು ಮತ್ತೊಮ್ಮೆ ಸಾಧಾರಣವಾದ ಆಡುಭಾಷೆಯಲ್ಲಿ, ಸರಳವಾಗಿ, ಸುಲಭವಾಗಿ ಅರ್ಥಕೊಡುವಂತೆ, ಹೇಳುತ್ತಾರೆ. ಇದರಲ್ಲಿ ವಿವರ ಇನ್ನೂ ಹೆಚ್ಚಿರುತ್ತದೆ ಮಾತು ಮುಗಿದೊಡನೆ ಬಂದವರೆಲ್ಲ ನೇಪಥ್ಯಕ್ಕೆ ತೆರಳುತ್ತಾರೆ. ಈ ದೃಶ್ಯ ನಡೆಯುವ ಹೊತ್ತಿನಲ್ಲಿ ಮಯೆಜಿತ ಒಳಗೆ ಹೋಗಿದ್ದವ ಪೋಷಾಕು ಬದಲಾಯಿಸಿ ಹೊಸವೇಷದಲ್ಲಿ ಬರಲು ಅವಕಾಶವಾಗುತ್ತದೆ. ಇದೇ ಹೊತ್ತು ಕಳೆಯಲು ವಾಕಿ ಹಾಡುತ್ತಿರುತ್ತಾನೆ. ಕಾಲ ಕಳೆದುದರ ಸೂಚನೆ ಇದು. ಇದು ಮುಗಿದೊಡನೆ ಎರಡನೆಯ ಅವತಾರದಲ್ಲಿ ಪ್ರಮುಖನೆನಿಸಿದ ನೊಚಿಜಿತೆ ಎಂಬಾತ ಬುದ್ಧ ದೇವತೆ ಅಥವಾ ಷಿಂಟೋ ದೇವತೆ ಅಥವಾ ವೀರಯೋಧ-ಇವರಿಗೆ ಯೋಗ್ಯವಾದ ಬಟ್ಟೆಬರೆ ಮುಖವಾಡಗಳನ್ನು ಧರಿಸಿ ರಂಗಭೂಮಿಯ ಮುಂಭಾಗಕ್ಕೆ ಬರುತ್ತಾನೆ. ರಾತ್ರಿಯಲ್ಲಿ ವಿಹರಿಸುತ್ತಾನೆಂಬುದರ ಸೂಚಕವಾಗಿ ಅತ್ತಿಂದಿತ್ತ ಒಮ್ಮೆ ಮೆಲು ನಡೆಯಿಡುತ್ತ ಒಮ್ಮೆ ನೃತ್ಯಮಾಡುತ್ತ ಅಭಿನಯ ಅಂಗವಿನ್ಯಾಸಗಳಿಂದ ತನಗಿರುವ ದೇವತ್ವಗುಣವನ್ನು ಸೂಚಿಸುತ್ತಾನೆ. ಮಾತಿನಲ್ಲಿ, ಅಭಿನಯದಲ್ಲಿ ತನ್ನ ಸಾಹಸ ಕೃತ್ಯಗಳನ್ನೂ ತ್ಯಾಗ ಸಹಿಷ್ಣುತೆಯ ಕಷ್ಟಕೋಟಲೆಗಳನ್ನೂ ಸಾವಿನ ಸಂಕಟವನ್ನೂ ನರಕದಲ್ಲಿನ ನರಕಾಟವನ್ನೂ ಬಣ್ಣಿಸುತ್ತಾನೆ. ತನಗೆ, ತನ್ನ ಆತ್ಮಕ್ಕೆ, ವಾಕಿ ಶಾಂತಿ ದಯಪಾಲಿಸಿ ಮೋಕ್ಷವೀಯಲೆಂದು ಬೇಡುತ್ತಾನೆ. ವಾಕಿ ಅದಕ್ಕಾಗಿ ಪ್ರಾರ್ಥನೆ ಸಲ್ಲಿಸಬೇಕೆನ್ನುತ್ತಾನೆ. ಆಗಲೇ ಷಿತೆಯು ತನ್ನ ಕತೆಯನ್ನು ಅಭಿನಯಿಸಿ ನುಡಿಯುತ್ತಾನೆ. ಅಥವಾ ಏನೂ ನುಡಿಯದೆ ನೃತ್ಯದಲ್ಲಿ ಭಾವವನ್ನು ತೋರಿಸುತ್ತಾನೆ.

ನಾಟಕ ಪ್ರದರ್ಶನ ಪೂರ್ತಿ ಸಾಮಾನ್ಯವಾಗಿ ಹಿಮ್ಮೇಳವಿರುತ್ತದೆ ಅಥವಾ ಮೇಳದವರು ಅಭಿನೇತೃಗಳ ಜೊತೆಗೋ ತಾವೇ ಬೇರೆಯಾಗಿಯೋ ಹಾಡುತ್ತಿರುತ್ತಾರೆ.

ಮೇಳದವರು ರಂಗದ ಒಂದು ಪಾಶ್ರ್ವ ಕುಳಿತಿರುತ್ತಾರೆ-ಸಾಮೂಹಿಕಗಾಯನ, ಒಬ್ಬೊಬ್ಬರು ಇಬ್ಬಿಬ್ಬರು ಹಾಡುವುದು. ಅಭಿನೇತೃಗಳ ಜೊತೆಗಿನ ಗಾಯನ, ಇವು ಈ ಮೇಳದವರ ಕರ್ತವ್ಯ. ಅಡ್ಡಪಟ್ಟಿಯಿರುವ ಕೊಳಲು, ಭುಜದ ಮೇಲಿನ ಮೃದಂಗ ಅಥವಾ ತಮಟಿ (ಟ್ಸುಜುಮಿ)-ಇವು ವಾದ್ಯಗಳು. ಮೊಣಕಾಲಿನ ಮೇಲೆ ಪವಡಿಸಿರುವ ದೊಡ್ಡ ಮೃದಂಗ ಅಥವಾ ತಮಟೆ (ಓಕಾವ)ಯನ್ನೂ ಬಳಸುವುದುಂಟು.

ಜಪಾನೀ ರಂಗಭೂಮಿಯ 'ಸಜ್ಜಿಕೆ ತುಂಬ ಸರಳ. ಸಾಧಾರಣವಾಗಿ ಒಂದು ಕೈ ಬೀಸಣಿಗೆ ಇದ್ದೇ ಇರುತ್ತದೆ. ಅದರಲ್ಲೂ ನೃತ್ಯದೃಶ್ಯಗಳಲ್ಲಿ ಪ್ರಮುಖ ಅಭಿನೇತೃ 'ಷಿತೆ ಮತ್ತು ಆತನ ಸಹಾಯಕ ನಟ 'ಷಿತೆ-ಜ್ಯೂರೆ ಇವರು ಮೊಖವಾಡಗಳನ್ನು ಧರಿಸುತ್ತಾರೆ. ಬತ್ತದ ಗದ್ದೆಯಿಂದ ಹಕ್ಕಿಗಳನ್ನು ಓಡಿಸಬೇಕಾದರೆ ಅವರ ಪರಿಕರಣ ದೋಣಿಯ ಆಕಾರದಲ್ಲಿ ಜೋಡಿಸಿದ ಬೊಂಬಿನ ಸರಗಳು. ಅದರ ಮಧ್ಯೆ ಮೂವರು ನಿಲ್ಲುವರು. ದೋಣಿಯ ಒಂದು ಕೊನೆಯಲ್ಲಿ ಬತ್ತದ ತೆನೆ ಸಿಕ್ಕಿಸಿರುತ್ತವೆ. ಇನ್ನೊಂದು ಕೊನೆಯಲ್ಲಿ ಕೈಯಲ್ಲಿ ಹುರಿಯೊಂದನ್ನು ಹಿಡಿದು ಬೀಸುತ್ತಿರುವ ಮನುಷ್ಯ. ಜೊತೆಯಿನ್ನಿಬ್ಬರು ಭಾಷಣ ಮತ್ತು ಹಾಡುಗಳಿಗೆ. ಇಡೀ ನೋ ನಾಟಕದ ಸ್ವರೂಪ ಹೀಗಿ ಬಹು ಸರಳವಾಗಿದ್ದರೂ ಹೃದಯಂಗಮವಾಗಿರುತ್ತದೆ. 

ನೋ ನಾಟಕಗಳೆಲ್ಲ ಸೃಷ್ಟಿಯಾದುದು 15ನೆಯ ಶತಮಾನದಲ್ಲಿ. ಈ ನಾಟಕಗಳ ಮುಖ್ಯ ಗುಣ ಸಂಯಮ ಹಾಗೂ ಸಾಂಕೇತಿಕತೆ. ನಾಟಕದ ಬಿಗುಪನ್ನು ಸಡಿಲಿಸಲು ನಡುನಡುವೆ ಕೀಯೋಜೆನ್ ಎಂಬ ಪ್ರಹಸನಗಳ ಬಳಕೆ ಅನಂತರದ ಕಾಲದಲ್ಲಿ ಹೆಚ್ಚಿತು. ಬುದ್ಧಿ ಪ್ರಧಾನವಾದ ನೋ ನಾಟಕ ಮುಖ್ಯವಾಗಿ ಪಂಡಿತ ರಂಜಕವಾಗಿತ್ತು. ಹದಿನೇಳನೆಯ ಶತಮಾನದಲ್ಲಿ, ಜನಸಾಮಾನ್ಯರಿಗಾಗಿ ರಚನೆಗೊಂಡ ಕಾಬುಕೀ (ನೋಡಿ- ಕಾಬುಕೀ) ನಾಟಕಗಳು ಹುಟ್ಟಿಕೊಂಡವು. ಸಾಂಪ್ರದಾಯಿಕವಾದರೂ ಜನಪ್ರಿಯವಾಗಿದ್ದ ಈ ನಾಟಕಗಳಲ್ಲಿ ವಿಪರೀತ ವೇಷಭೂಷಣಗಳೂ ಪ್ರಾಸಬದ್ಧ ಸಂಭಾಷಣೆಗಳೂ ವಿಚಿತ್ರ ರೀತಿಯ ಅಭಿನಯಗಳೂ ಇದ್ದು ನೃತ್ಯ ಹಾಗೂ ಸಂಗೀತಗಳಿಂದ ನಾಟಕ ರಂಜಕವಾಗಿರುತ್ತದೆ. ಜೊರೂರಿ ಎಂಬ ನಾಟಕೀಯ ಲಾವಣಿಯ ಬಳಕೆ ಕಾಬುಕೀ ನಾಟಕಗಳಲ್ಲಿನ ಇನ್ನೊಂದು ಆಕರ್ಷಣೆ. 19ನೆಯ ಶತಮಾನದ ಕೊನೆಕೊನೆಗೆ ಐರೋಪ್ಯ ನಾಟಕಗಳ ಅನುವಾದಗಳು ಜಪಾನೀ ರಂಗಭೂಮಿಗೆ ಬರತೊಡಗಿದವು. 20ನೆಯ ಶತಮಾನದ ಜಪಾನೀ ನಾಟಕ ಆಧುನಿಕ ಐರೋಪ್ಯ ರಂಗಭೂಮಿಯ ಎಲ್ಲ ಪರಿಕರಗಳನ್ನೂ ಬಳಸಿಕೊಂಡು ಸಮೃದ್ಧವಾಗಿ ಬೆಳೆದಿದೆ.						(ಬಿ.ಎಸ್.ಆರ್.ಆರ್.)

ಒಂದು ಬಗೆಯ ನಾಟಕ ಜಪಾನಿನಲ್ಲಿ 7ನೇ ಶತಮಾನದಲ್ಲಿ ಪ್ರಾರಂಭವಾಯಿತು. ಅಂದಿನಿಂದ ಕಾಣುವುದು ನಾಟಕದ, ಸಂಗೀತದ ಮತ್ತು ನೃತ್ಯದ ಅಂಶಗಳನ್ನು ಬೆರೆಸುತ್ತ ಹೊಸ ಪ್ರಕಾರಗಳನ್ನು ಸೃಷ್ಟಿಸುತ್ತ ಬಂದಿರುವ ಪ್ರಕ್ರಿಯೆಯನ್ನು. ತಿಳಿದು ಬಂದಿರುವ ಮಟ್ಟಿಗೆ ಜಪಾನಿನ ಮೊದಲನೆಯ ರಂಗಪ್ರದರ್ಶನ `ಗಿಗಕು, ಇದು ಕ್ರಿ.ಶ., 612ರಲ್ಲಿ ಚೀನದಿಂದ ಬಂತಿತು (ಆದರೆ ಚೀನಕ್ಕೆ ಗ್ರೀಸ್‍ನಿಂದ ಅಥವಾ ಭಾರತದಿಂದ ಹೋಗಿರುವ ಸಾಧ್ಯತೆ ಉಂಟು). ಮುಖವಾಡಗಳನ್ನು ಧರಿಸಿದ ನೃತ್ಯಗಾರರ ನೃತ್ಯಕ್ಕೇ `ಗಿಗಕು ಇವುಗಳಲ್ಲಿ ವಿನೋದವಿರುತ್ತಿತ್ತು. 8ನೇ ಶತಮಾನದಲ್ಲಿ ಆಳರಸರು ಇದು ಗಾಂಭೀರ್ಯವಿಲ್ಲದ ಹುಡುಗಾಟ ಎಂದು ಭಾವಿಸಿದ್ದರಿಂದ ಗಿಗಕು ನಿಂತು ಹೋಯಿತು. ಚೀನದಿಂದ ಬಂದ `ಬಿಗರು ಇದರ ಸ್ಥಾನವನ್ನು ಆಕ್ರಮಿಸಿತು. ಈ ಪ್ರದರ್ಶನವು ಸರಳವಾದ ಸನ್ನಿವೇಶಗಳನ್ನು (ಉದಾ: ಸೈನ್ಯಾಧಿಕಾರಿಯೊಬ್ಬ ಯುದ್ಧರಂಗದಿಂದ ಹಿಂದಿರುಗುವುದು) ನಿರೂಪಿಸುತ್ತಿತ್ತು. ಭಾಗವಹಿಸುವವರು ಕಣ್ಣನ್ನು ಸೆಳೆಯುವಂಥ ಉಡುಪನ್ನು ಧರಿಸುತ್ತಿದ್ದರು. ವಿನೂತನ ವೈಭವ ಈ ನೃತ್ಯಗಳಿಗಿರುತ್ತಿತ್ತು. ಚೀನಾದ ಆಸ್ಥಾನವನ್ನು ಅನುಕರಿಸಲು ಹೊರಟಿದ್ದ ಜಪಾನೀ ರಾಜರು ಈ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದರು.

8ನೇ ಶತಮಾನದಲ್ಲಿ `ಸಂಗಕು ಎನ್ನುವ ಪ್ರದರ್ಶನವೂ ಜನಪ್ರಿಯವಾಗಿತ್ತು. ಇದರಲ್ಲಿ ದೊಂಬರಾಟವೇ ಹೆಚ್ಚು. ಬಿಗಿಯಾದ ಹಗ್ಗದ ಮೇಲೆ ನಡೆಯುವುದು ಇದರ ಒಂದು ಭಾಗ. ಮತ್ತೊಂದು ಕತ್ತಿಗಳನ್ನು ನುಂಗುವುದು.

11ನೆಯ ಶತಮಾನದಲ್ಲಿ ಹ್ವಸ್ವ ವಿನೋದ ನಾಟಕಗಳ ಪ್ರದರ್ಶನವು ಪ್ರಾರಂಭವಾಯಿತು. ಆಧುನಿಕ ಕಾಲದಲ್ಲಿಯೂ ಪ್ರದರ್ಶಿಸುವ ಒಕಿನಾ ಎನ್ನುವ ಧಾರ್ಮಿಕ ವಿಧಿಯ ನೃತ್ಯವು ಈ ಕಾಲದಲ್ಲಿ ಪ್ರಾರಂಭವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಒಳ್ಳೆಯ ಬೆಳೆಗಾಗಿ ಪ್ರಾರ್ಥನೆ ಅಥವಾ ಒಂದು ದೇವಾಲಯದ ಚರಿತ್ರೆ ಇವು ವಸ್ತುಗಳಾಗಿದ್ದ ನಾಟಕಗಳ ಪ್ರದರ್ಶನವೂ ಆಗುತ್ತಿತ್ತು.

14ನೇ ಶತಮಾನದಲ್ಲಿ ಕಲಾತ್ಮಕವಾದ ನೋ ನಾಟಕ ರೂಪವು ಕಾಣಿಸಿಕೊಂಡಿತು. ಈ ನಾಟಕ ರೂಪ ಇಂದಿಗೂ ಜೀವಂತವಾಗಿದೆ. ಸಾಮಾನ್ಯವಾಗಿ ಪ್ರೇಕ್ಷಕರು ರಂಗಮಂಟಪ ಎರಡು ಪಾಶ್ರ್ವಗಳಲ್ಲಿ ಕುಳಿತಿರುತ್ತಾರೆ. ಒಮ್ಮೊಮ್ಮೆ ಮೂರು ಪಾಶ್ರ್ವಗಳಲ್ಲಿ ಕುಳಿತುಕೊಳ್ಳುವುದು ಉಂಟು. ನೋ ನಾಟಕಗಳಲ್ಲಿ ಪುರುಷರು ಮಾತ್ರ ಪಾತ್ರಧಾರಿಗಳು. ಇವರು ಸ್ತ್ರೀಯರ ಪಾತ್ರಗಳನ್ನು ವಹಿಸಿದಾಗ ಅಥವಾ  ತಮಗಿಂತ ಬಹು ಹೆಚ್ಚಾದ ಅಥವಾ ಕಡಿಮೆ ವಯಸ್ಸಿನ ಪುರುಷರ ಪಾತ್ರಗಳನ್ನು ವಹಿಸಿದಾಗ ಸುಂದರವಾದ ಮುಖವಾಡಗಳನ್ನು ಧರಿಸುತ್ತಾರೆ. ರಂಗಮಂಟಪ ಒಂದು ಪಾಶ್ರ್ವದಲ್ಲಿ ಮೇಳದವರು ಕುಳಿತುಕೊಳ್ಳುತ್ತಾರೆ, ಪಾತ್ರಧಾರಿಗಳು ನೃತ್ಯ ಮಾಡುವಾಗ ಹಾಡುತ್ತಾರೆ. ಆದರೆ ನಾಟಕಕ್ಕೂ ಇವರಿಗೂ ಸಂಬಂಧವಿಲ್ಲ. ಕಿಯೊಜನ್ ನೋ ನಾಟಕದ ಭಾಗವಾಗಿದೆ, ಇದು ಬದುಕಿನ ವಿನೋದದ ಮುಖಗಳನ್ನು ಪ್ರದರ್ಶನಕ್ಕೆ ತರುತ್ತದೆ.

ಇಪ್ಪತ್ತನೆಯ ಶತಮಾನದ ಪ್ರಾರಂಭದಿಂದ ಹಿಂದಿನ ಜಪಾನೀ ನಾಟಕಗಳನ್ನು ಆಧುನಿಕ ಜಪಾನೀ ಭಾಷೆಯಲ್ಲಿ ಅಳವಡಿಸಿ ಪ್ರದರ್ಶಿಸುವ ಪ್ರಯೋಗಗಳು ನಡೆದವು. ಯೂರೋಪಿನ ನಾಟಕಗಳನ್ನು ಅನುವಾದಿಸಿ ಪ್ರದರ್ಶಿಸಲಾಗಿದೆ. ಕೆಲವರು ಆಧುನಿಕ ನಾಟಕಕಾರರು ಪ್ರಾಚೀನ ಕಥೆಗಳನ್ನು ಆಧುನಿಕ ಮನಶ್ಶಾಸ್ತ್ರದ ದೃಷ್ಠಿಯಿಂದ ನಿರೂಪಿಸಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಷೇಕ್ಸ್‍ಪಿಯರನ `ಮೆಕ್ ಬೆತ್‍ನಂಥ ನಾಟಕಗಳನ್ನು ಕಬೂಕಿ ಮಾದರಿಯ ನಾಟಕಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದಾರೆ. ಮಿಷಿಮ ಯೂಕಿಯೊ, ಸಾಂಪ್ರದಾಯಕ ವಸ್ತುಗಳನ್ನು ಆಧುನಿಕ ರೀತಿಯಲ್ಲಿ ನಿರೂಪಿಸುವಲ್ಲಿ ಬಹಳ ಯಶಸ್ವಿಯಾಗಿದ್ದಾನೆ.

ಈಚೆಗೆ ಜಪಾನೀ ನಾಟಕಕಾರರು ಜಪಾನೀ ಸಮಾಜದಲ್ಲಿ ಘರ್ಷಣೆ, ಸಾಮಾಜಿಕ ನ್ಯಾಯ-ಇಂಥ ವಸ್ತುಗಳನ್ನು ಆರಿಸಿಕೊಳ್ಳುತ್ತಿದ್ದಾರೆ.					
										ಪರಿಷ್ಕರಣೆ
									ಎಲ್.ಎಸ್.ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ